ವೃದ್ಧಾಶ್ರಮದತ್ತ ಬಯಲು ಸೀಮೆಯ ಹಳ್ಳಿಗಳು

ಸೂರ್ಯ ಪಶ್ಚಿಮಕ್ಕೆ ಇಳಿಯುತ್ತಿದ್ದರೆ ಚಳಿಗೆ ಮೈತುಂಬಾ ಕಂಬಳಿ ಸುತ್ತಿ, ತಲೆಯನ್ನು ರಸ್ತೆಗೆ ತಿರುಗಿಸಿ ಯಾರಾದರೂ ಬರತ್ತಾರೆಂದು ಜತನದಿಂದ ಕಾಯುತ್ತಿದ್ದ ಆ ಮುದಿ ಜೀವಕ್ಕೆ ರಸ್ತೆ ಪೂರ್ತಿ ನಿಶ್ಯಬ್ಧ. ಸಂಜೆ ಆಯ್ತೆಂದು ಆಗೊಂದು ಹೀಗೊಂದು ಗೂಡಿಗೆ ಮರಳುತ್ತಿದ್ದ ಪಕ್ಷಿಗಳು ಕೂಗು ಮಾತ್ರ ಕೇಳಿಸುತ್ತಿತ್ತು. ಈ ನಡುವೆ ನಾಲ್ಕಾರು ಮೇಕೆಗಳು ಕೊರಳಿಗೆ ಕಟ್ಟಿದ್ದ ಗೆಜ್ಜೆಯಿಂದ ಶಬ್ಧ ಮಾಡುತ್ತಾ ಸಾಗುತ್ತಿದ್ದಾಗ, ಜಗಲಿಯ ಮೇಲಿದ್ದ ಕೆಂಪಣ್ಣನಿಗೆ ಖುಷಿ. ಬೆಳಿಗ್ಗೆ ಇಂದ ಮಾತಾಡದೆ ಬಂಧಿಯಾಗಿದ್ದ ಗಂಟಲನ್ನು ತೆರೆದು “ಬೋರಣ್ಣ ಇವತ್ತು ಇಷ್ಟೊತ್ತು ಕಾಡಲ್ಲೇ ಇದ್ದಿಯಾ?” ಅಂದಾಗ “ಮನೆಯಲ್ಲಿ ಯಾರಿದ್ದಾರೆ ಕೆಂಪಣ್ಣಾ, ಬೇಗ ಬಂದು ಏನ್ ಮಾಡ್ಲಿ?” ಎನ್ನುತ್ತಾ ಅವನ ಪಾಡಿಗೆ ಹೋಗುತ್ತಿದ್ದರೆ, ಕೆಂಪಣ್ನ ಮತ್ತೊಬ್ಬರು ಯಾರಾದರೂ ರಸ್ತೆಯಲ್ಲಿ ಬರುತ್ತಾರಾ ಅನ್ನುವ ಆಸೆಗಣ್ಣುಗಳಿಗೆ, ಸೂರ್ಯ ಮುಳುಗಿ ಕತ್ತಲಾವರಿಸಿದ ಕುರುಹು ಎಂಬAತೆ ಬೀದಿ ದೀಪಗಳು ಹತ್ತಿದವು. ವಯಸ್ಸಾದ ಆ ಮುದಿ ಜೀವ ಮಾತಿಗಾಗಿ ಮತ್ತೊಂದು ಜೀವವನ್ನು ಅರಸುತ್ತಿತ್ತು.”
ಇಂತಹ ಹಳ್ಳಿಗಳ ಚಿತ್ರಣ ಕೆ.ಆರ್.ಪೇಟೆ, ನಾಗಮಂಗಲ ರೀತಿಯ ನೀರಾವರಿ ಪ್ರದೇಶವಲ್ಲದ, ಕೊಳವೆಬಾವಿ
ಮಳೆಯಾಶ್ರಿತ ಒಣ ಪ್ರದೇಶದ ಹಳ್ಳಿಗಳಲ್ಲಿ ಸಾಮಾನ್ಯ ಎಂದಾದರು ಒಮ್ಮೆ ಸುಮ್ಮನೆ ತಿರುಗಾಡಿ ನೋಡಿ, ಹಿಂದೆ ಕಾಲರ ಪ್ಲೇಗ್‌ನಂತೆ ಮಹಾಮಾರಿ ರೋಗಕ್ಕೆ ಊರೂರೆ ಬೆಚ್ಚಿ ಖಾಲಿಯಾಗಿರುವಂತಹ ಚಿತ್ರಣ! ಮನೆಗಳ ನಡುವೆ ಅಲ್ಲೊಂದು ಇಲ್ಲೊಂದು ಗತಕಾಲದ ಗತವೈಭವದ ಮನೆಗಳು, ಛಾವಣಿ ಕುಸಿದು ಪಾಳು ಮನೆಗಳಾಗಿ ನಿಮ್ಮನ್ನು ಸ್ವಾಗತಿಸಿದರೆ, ಅದೇ ರಸ್ತೆಯಲ್ಲಿ ಮುಂದೆ ಸಾಗಿದಂತೆ ಜಗಲಿಯಲ್ಲಿ ಕುಳಿತ ಒಂದಷ್ಟು ವಯಸ್ಸಾದ ಜೀವಗಳು, ನಿಮ್ಮನ್ನು ಸ್ವಾಗತಿಸಲು ಕುಳಿತವರಂತೆ ನಿಮ್ಮನ್ನು ನೋಡುತ್ತಿರುತ್ತಾರೆ. ಊರಲ್ಲಿದ್ದ ಅಷ್ಟಿಷ್ಟು ಹೊಲಗದ್ದೆಗಳಿಗೆ ಸಾವಿರಾರು ಅಡಿ ಬೋರ್ ಕೊರೆದರೂ ನೀರು ಜಿನುಗದೆ, ವ್ಯವಸಾಯ ಮಾಡಲು ಆಳು – ಕಾಳು ಸಿಗದೆ, ಅಣ್ಣ ತಮ್ಮಂದಿರ ನಡುವಿನ ಆಸ್ತಿ ಹಂಚಿಕೆ ಕೋರ್ಟ್ ಮೆಟ್ಟಿಲೇರಿ, ಕಾಲುವೆ ನೀರು ಬರದೆ, ಮಳೆ ಸುರಿಯದೆ, ಬೆಳೆದ ತರಕಾರಿಗೆ ಬೆಲೆ ಸಿಗದೆ ರಸ್ತೆಯಲ್ಲಿ ಸುರಿದು, ವ್ಯವಸಾಯದ ಸಹವಾಸವೇ ಬೇಡವೆಂದು ತೆಕ್ಕಲು ಬಿಟ್ಟಿರುವ ಪಾಳು ಜಮೀನುಗಳಲ್ಲಿ, ಕುರುಚಲು ಗಿಡಗಳು ನಿಮ್ಮನ್ನು ಅಳುಮುಖದಿಂದ
ಸ್ವಾಗತಿಸುತ್ತವೆ. ಈಗೀಗ ದೂರದ ಹೊಲಕ್ಕು ಊರಿಗೂ ಹೋಗಿಬರುವ ಗೋಜಲೇ ಬೇಡವೆಂದು ತೋಟದಲ್ಲೇ ಒಂದು ಪುಟ್ಟ ಮನೆಮಾಡಿ ಹಸುಕಟ್ಟಿ ತೆಂಗಿನ ತೋಟದಲ್ಲೇ ವಾಸಿಸುತ್ತಿದ್ದಂತೆ, ಬಾಳಿ ಬದುಕಿದ ಊರಿನ ಮನೆಯಲ್ಲಿ ಖಾಲಿ ಬಿಡಬಾರದೆಂದು, ಮನೆ ದೀಪ ಹತ್ತಿಸುವ ಲೆಕ್ಕಾಚಾರದಲ್ಲಿ ವಯಸ್ಸಾದ ಅಪ್ಪ ಅಮ್ಮಂದಿರನ್ನು ಹಳೆ ಮನೆಯಲ್ಲೇ ಬಿಟ್ಟು ತೋಟದ ಕಡೆ ಒಂದಷ್ಟು ಮಂದಿ ಮುಖಮಾಡುತ್ತಿದ್ದಾರೆ.

 ಹಳ್ಳಿಗೆ ಕಾಂಕ್ರೀಟ್ ರಸ್ತೆ, ಕುಡಿಯಲು ಪಿಲ್ವರ್ ನೀರು, ಉದ್ಯೋಗ ಖಾತ್ರಿ, ಆಸ್ಪತ್ರೆ, ಯಶಸ್ವಿನಿ, ವಿದ್ಯುತ್ ಎಲ್ಲಾ ಹಳ್ಳಿಗಳ ಹತ್ತಿರ ಬರುತ್ತಿದ್ದರೂ ಯಾವುದೇ ಸೌಲಭ್ಯಗಳು ನಮಗಲ್ಲ ಅನ್ನುವಂತೆ ಸರ್ಕಾರಿ ಶಾಲೆಗೆ ಬೀಗ ಜಡಿದು, ಸಿಟಿ ಕಡೆಗಿನ ಬಸ್ಸುಗಳು ತುಂಬಿದ ಬಸುರಿಯಂತೆ ಸಾಗುತ್ತಿರುವಾಗ, ನಗರೀಕರಣದ ಕಾಲಘಟ್ಟದಲ್ಲಿ ಹಳ್ಳಿಗಳು ಸೊರಗುತ್ತಿವೆ.

ಹತ್ತಾರು ವರ್ಷಗಳ ಹಿಂದೆ ಹಳ್ಳಿಗೆ ಬಾಯ್ ಹೇಳಿ, ಬ್ಯಾಗ್ ಹಿಡಿದು ಬದುಕನ್ನು ಅರಸುತ್ತಾ ಬಾಂಬೆ ಬಸ್ ಹತ್ತಿದವರು ಇಂದು ಬಾಂಬೆ ನಿವಾಸಿಗಳಾಗಿದ್ದಾರೆ. ಇತ್ತೀಚಿಗೆ ಮೈಸೂರು ಬೆಂಗಳೂರಿಗೆ ಮುಖಮಾಡಿ ಜೀವನ ಕಟ್ಟಿಕೊಳ್ಳುತ್ತಿರುವ ಸಾವಿರಾರು ಹಳ್ಳಿಗರು ನಗರವಾಸಿಗಳಾಗುತ್ತಿದ್ದರೆ, ಹೆತ್ತವರು ಅಳಿದುಳಿದ ಹಳ್ಳಿಯಲ್ಲೇ ದಿನದೂಡುತ್ತಾ ಯಾರಾದರೂ ಸಿಕ್ಕರೆ ಸಾಕು, ಒಂದಷ್ಟು ಮಾತಾಡಿ ಮನಸ್ಸನ್ನು ತಣಿಸಿಕೊಳ್ಳಲು ಕಾಯುತ್ತಿರುವ ಗ್ರಾಮ ಭಾರತದ ವೃದ್ಧಾಶ್ರಮಗಳು ನಿಮ್ಮನ್ನು ಸ್ವಾಗತಿಸದೆ ಇರದು!
ಹೇಗೂ ಪಟ್ಟಣ ನಿವಾಸಿಗಳಾಗಿದ್ದೀವಿ, ಅಪ್ಪ-ಅಮ್ಮರಿಗೂ ವಯಸ್ಸಾಗಿದೆ, ಹೊಲಗದ್ದೆ ಯಾರು ನೋಡಿಕೊಳ್ಳುತ್ತಾರೆಂದು ಅಕ್ಕ-ಪಕ್ಕದವರು ಒಟ್ಟಿಗೆ ಸೇರಿಸಿ ಹತ್ತಾರು ಎಕರೆಗಳ ಉಂಡೆ ಲೆಕ್ಕದಲ್ಲಿ ಮಾರಿ, ಉಂಡೆ ನಾಮ ತಿಕ್ಕಿಸಿಕೊಂಡ ಮೇಲೆ ಅಪ್ಪನ ಜೇಬಿಗೆ ಸಾವಿರ ರೂಪಾಯಿ ತುರುಕಿ ಮರೆಯಾಗುತ್ತಿದ್ದಾರೆ.
ಐಟಿ ಬಿಟಿಯ ವೈಟ್ ಕಾಲರ್ ನೌಕರರ ಹಳ್ಳಿಗಳತ್ತ ಮುಖಮಾಡಿ ಹತ್ತು – ಇಪ್ಪತ್ತು ಎಕರೆ ಹೊಲಗದ್ದೆಗಳನ್ನು ಲಕ್ಷ-ಲಕ್ಷಗಳಲ್ಲಿ ಖರೀದಿಸಿ, ಸುತ್ತಲೂ ಬೇಲಿಯಾಕಿ, ನೂರಾರು ತೆಂಗು ಅಡಿಕೆ ಪರಂಗಿ ಸಪೋಟ ಮರ-ಗಿಡಗಳ ನಡುವೆ ಫಾರಂಹೌಸ್ ನಿರ್ಮಿಸಿ, ಭಾನುವಾರದ ಬಾಡೂಟಕ್ಕಾಗಿ ಮಕ್ಕಳು ಮರಿಯೊಂದಿಗೆ ಬರುವ ಪಿಕ್‌ನಿಕ್ ಪ್ಲೇಸ್ ಆಗುತ್ತಿವೆ.
ಹಳ್ಳಿಗಳು ಬದುಕಿಗಾಗಿ ನಗರಕ್ಕೆ ಪಲಾಯನ ಮಾಡುತ್ತಿದ್ದರೆ ನಗರವಾಸಿಗಳು ವೀಕ್‌ಎಂಡ್ ಮೋಜಿಗಾಗಿ ಹಳ್ಳಿ ಹಾದಿ ಹಿಡಿಯುತ್ತಿದ್ದಾರೆ. ನಗರಗಳ ಹತ್ತಾರು ಕಿಲೋಮೀಟರ್ ವ್ಯಾಪ್ತಿಯ ಹಳ್ಳಿಗಳಿಗಿಂತ ಸುಗ್ಗಿಯೋ ಸುಗ್ಗಿ! ಸರ್ಕಾರ ಮೂಡಾ ಸೈಟ್‌ಗೆ ನೋಟಿಫಿಕೇಶನ್ ಡಿನೋಟಿಪಿಕೇಶನ್ ಮಾಡುತ್ತೋ-ಬಿಡುತ್ತೋ ಗೊತ್ತಿಲ್‌ಲ? ಇವರೇ ಸ್ವಯಂ ತೀರ್ಮಾನಿಸಿ ಖಾಸಗಿ ಡೆವಲಪರ್‌ಗೆ ಮಾರಿ ಬಂದಷ್ಟು ದುಡ್ಡಲ್ಲಿ ಬೈಕು ಕಾರು ಹಬ್ಬ ಮದುವೆ ಚಿನ್ನದಲ್ಲಿ ಕರಗಿಸಿ ಅವರ ಜಮೀನಿನಲ್ಲಿ ಕೂಲಿ ಮಾಡುತ್ತಿರುವಾಗ, `ಉಂಡ್ರೆ ಹೋಗುತ್ತೆ ತಿಂದ್ರೆ ಹೋಗುತ್ತೆ’ ಎಂದು ಜಿಪುಣತನದಲ್ಲಿ ಉಳಿಸಿದ್ದ ಪಿತ್ರಾರ್ಜಿತ ಆಸ್ತಿಯನ್ನು ಕಳೆದುಕ್ಕೊಂಡ ಮುದಿಜೀವಿಗಳು, ಮಕ್ಕಳು ಕೊಡುವ ಪುಡಿಗಾಸನ್ನು ಮೊಮ್ಮಕ್ಕಳಿಗೆ ಗಂಟಾಕಿ ಮನೆಯ ಜಗಲಿಯಲ್ಲಿ ಕಾಯುತ್ತಿರುವ ಮುದಿಜೀವಿಗಳು ಸಾಕಷ್ಟು ಕಾಣಸಿಗುತ್ತಿದ್ದಾರೆ. ನೌಕರಿ ಹರಸಿಯೋ, ಮಕ್ಕಳ ವಿದ್ಯಾಭ್ಯಾಸಕ್ಕೊ, ಸಿಟಿ ಆಕರ್ಷಣೆಯ ಬೆನ್ನಿಗೆ ಬಿದ್ದು ಗುಳೇ ಹೋಗುತ್ತಿರುವ ಹಳ್ಳಿಗರು ನಗರ ನಿವಾಸಿಗಳಾಗುತ್ತಿದ್ದು, ಚಾಟ್ಸ್ ಪಬ್ ಶಾಪಿಂಗ್ ಮಾಲ್ ಔಟಿಂಗ್ ಡೇಟಿಂಗ್ ಹೊಸಮನೆ ಮಕ್ಕಳಲ್ಲಿ ಕಳೆದು ಹೋಗುತ್ತಿದ್ದರೆ, ಹಳ್ಳಿಯಲ್ಲಿ ಹಿರಿಯರು ಮಕ್ಕಳು ಮೊಮ್ಮಕ್ಕಳು ಬರುವ ದಿನವನ್ನು ಮಂಜಾದ ಕಣ್ಣುಗಳಲ್ಲಿ ಎಣಿಕೆ ಮಾಡುತ್ತಾ, ಕೆಲಸವಿಲ್ಲದೆ ದಿನ ಕಳೆಯುತ್ತಾ, ತಿಂಗಳಿಗೊಮ್ಮೆ ಸಂಧ್ಯಾ ಸುರಕ್ಷೆಯ ಐನೂರು ರೂಪಾಯಿಗೆ ಪೋಸ್ಟ್ಮ್ಯಾನ್ ಇನ್ನೂ ಬರಲಿಲ್ಲವಲ್ಲಾ? ಅನ್ನಭಾಗ್ಯಕ್ಕೆ ಅದೇನೋ ಆಧಾರ್ ಸೇರಿಸಬೇಕಂತೆ ಅಂತ ತಡಬಡಾಯಿಸುತ್ತಾ ನ್ಯಾಯಬೆಲೆ ಅಂಗಡಿಗೆ ಎಡತಾಕುತ್ತಿರುವ ಚಿತ್ರಣ ನೀರಾವರಿ ಇಲ್ಲದ ಊರುಗಳಲ್ಲಿ ಸಾಮಾನ್ಯವಾಗಿದೆ.

ನಗರವಾಸಿಗಳಾದ ಮೇಲೆ ಹಳ್ಳಿಯಲ್ಲಿ ನೆಂಟರ ಸಾವಿಗೆ ಮುಂಜಾನೆ ಆಗಮಿಸಿ ಕೈಮುಗಿದು ಓಡುವಾಗ, ವರ್ಷಕ್ಕೆ ಒಂದೆರಡು ಹಬ್ಬಗಳಿಗೆ ನೆಂಟರAತೆ ಬಂದು; ಗ್ರಾಮದೇವತೆ ಹಬ್ಬದಲ್ಲಿ ಮಾತ್ರ ಊರಿನ ಬೀದಿಗಳು ತುಂಬಿದAತೆ, ಹತ್ತಾರು ಸ್ಕೂಟರ್ ಕಾರು ಮನೆಮುಂದೆ ನಿಲ್ಲಿಸಿ, ಒಂದೆರಡು ದಿನಗಳು ಊರಲ್ಲೇ ಉಳಿದು, ಅಕ್ಕ- ತಂಗಿಯರೊAದಿಗೆ ಹಬ್ಬ ಆಚರಿಸುವಾಗ ಮಾತ್ರ ತುಂಬಿದ ಮನೆ! ಎರಡೇ ದಿನಕ್ಕೆ ನಮಗೆ ತುಂಬಾ ಕೆಲಸವಿದೆ-ಮಕ್ಕಳಿಗೆ ಪರೀಕ್ಷೆ ಎಂದು ಗಂಟು ಮೂಟೆ ಕಟ್ಟಿ ನಗರಕ್ಕೆ ಕರೆತರುವ ಪಿಕ್‌ನಿಕ್ ಊರಾಗುತ್ತಿವೆ. ಮನೆ ಬಿಡುವಾಗ ಹೆತ್ತವರ ಜೇಬಿಗೆ ಒಂದಿಷ್ಟು ದುಡ್ಡು ತುರುಕಿ; ಏನಾದರೂ ಆದರೆ ಫೋನ್ ಮಾಡಿಸಿ ಎಂದು ಹೇಳುತ್ತಾ, ನಗರಗಳ ದಿಕ್ಕಿಗೆ ಧೂಳೆಬ್ಬಿಸಿ ಸಾಗುವ ದಿಕ್ಕಿಗೆ ಕೈಬೀಸುವ ಮುದಿ ಜೀವಗಳ ಮನಸ್ಸು ಖಾಲಿಯಾಗಿ, ನಿರ್ಜೀವ ಮನೆಗಳು ಪಳಿಯುಳಿಕೆಗಳಾಗಿ ಉಳಿಯುತ್ತಿವೆ.

ಇನ್ನೂ ನೀರಾವರಿ ಪ್ರದೇಶಗಳಲ್ಲಿ ಕಬ್ಬಿನ ಬೆಲೆ ನೆಲಕಚ್ಚಿದಾಗ ಕಬ್ಬಿಗೆ ಬೆಂಕಿಯಿಟ್ಟು, ಬೆಳೆಯುವ ಬತ್ತಕ್ಕೆ ಬೆಂಕಿ ರೋಗ ತಗುಲಿದಾಗ ರೈತರ ಆತ್ಮಹತ್ಯೆಯ ವಿಷಯ, ದಿನಪತ್ರಿಕೆಯ ಒಳಪುಟದ ಮೂಲೆಯಲ್ಲಿ ಸಾಮಾನ್ಯ ಎನ್ನುವಂತೆ ಚಿಕ್ಕದಾಗುತ್ತಿದೆ. ಮೈಮೂಳೆ ಮರಿದು ತರಕಾರಿ ಬೆಳೆದು ಸಿಟಿ ಮಾರುಕಟ್ಟೆಯಲ್ಲಿ ಮಾರಿದಾಗ, ತಮ್ಮ ಬಟವಾಡೆಯ ದುಡ್ಡಿಗಾಗಿ, ವ್ಯಾಪಾರಿಯ ಸುತ್ತ ಕುಕ್ಕರುಗಾಲಿನಲ್ಲಿ ಕುಳಿತು ಕಮಿಷನ್ ಮುರಿದು ಕೊಡುವ ಹಣಕ್ಕಾಗಿ ಕೈ ಚಾಚುವ ರೈತರು ಮಾರುಕಟ್ಟೆಯಲ್ಲಿ ಕಾಣುತ್ತಿರುತ್ತಾರೆ. ಒಮ್ಮೊಮ್ಮೆ ಹಾಕಿದ ಬಂಡವಾಳಕ್ಕೂ ಬರ ಬಂದಾಗ ರಸ್ತೆಯಲ್ಲೇ ಸುರಿದ ಟಮೋಟೋ ನಿಮಗೆ ಆಗಾಗ ಕಾಣಸಿಗುತ್ತದೆ. ಇಪ್ಪತ್ತು ವರ್ಷಗಳ ಹಿಂದೆ ತಿಂಗಳಿಗೆ ಸಾವಿರ ಸಂಬಳವನ್ನು ಇಂದು ಐವತ್ತು ಸಾವಿರದ ಲೆಕ್ಕದಲ್ಲಿ ಎಣಿಸುತ್ತಿದ್ದರೂ, ಅಂದು ಐದು ರೂಪಾಯಿಯ ತರಕಾರಿ ಇಂದು ಹತ್ತು ರೂಪಾಯಿಯಾದರೆ ಸಾಕು, ಬಾಯಿ ಬಡಿದುಕ್ಕೊಂಡು ಹಣದುಬ್ಬರದ ಮಾತಾಡುತ್ತಾರೆ. ಅಕ್ಕಬೇಳೆ ತರಕಾರಿ ಈರುಳ್ಳಿ ಬೆಲೆ ಮಾತ್ರ ಇನ್ನೂ ಇಪ್ಪತ್ತು ವರ್ಷವಾದರೂ ಇಪ್ಪತ್ತೇ ರೂಪಾಯಿನೇ ಇರಬೇಕು ಅನ್ನುವವರು ದೇಶದ ಎಕನಾಮಿಕ್ಸ್ ಡಾಲರ್ ಬೆಲೆ ಹಣದುಬ್ಬರಗಳ ಬಗ್ಗೆ ಸಿಕ್ಕ ಸಿಕ್ಕಲ್ಲಿ ಭಾಷಣ ಬಿಗಿಯುತ್ತಿರುವುದರಿಂದ ಹಳ್ಳಿಯ ಬೇಸಾಯಕ್ಕೆ ಬೆಲೆ ಇಲ್ಲದೆ ರೈತರು ನೆಲೆ ಹುಡುಕುತ್ತಿದ್ದಾರೆ. ವಯಸ್ಸಾದವರು ನೌಕರಿಯಲ್ಲಿ ರಿಟೈರ್ಡ್ ಆದವರು ಜೀವನದ ಸಂಧ್ಯಾ ಕಾಲದಲ್ಲಿ ಊರಿಗೆ ಬಂದಾಗ ಹುಟ್ಟೂರಿನಲ್ಲಿ ಅವರೇ ಅಪರಿಚಿತರಾಗಿ ನಿಂತಿರುತ್ತಾರೆ. ಚೆನ್ನಾಗಿದ್ದ ಕಾಲದಲ್ಲಿ ಆಗಾಗ್ಗೆ ಊರಿಗೆ ಬರುತ್ತಾ ಒಂದಷ್ಟು ಊರಿನವರ ಪರಿಚಯ ಉಳಿಸಿಕೊಂಡಿದ್ದರೆ ತಾನೇ ಪರಿಚಿತರಾಗಿ ಉಳಿಯುವುದು? ಇನ್ನೂ ಹಳ್ಳಿಯಲ್ಲಿ ಇರುವ ಹೆಣ್ಣು ಮಕ್ಕಳನ್ನು ವ್ಯವಸಾಯದ ಹುಡುಗರಿಗೆ ಹೆಣ್ಣು ಕೊಡುವಲ್ಲಿ ಹಿಂದೆಮುAದೆ ನೋಡಿ, ಅಳೆದು – ಸುರಿದು ಸಿಟಿಯಲ್ಲಿರುವ ಗಾರ್ಮೆಂಟ್ ಹುಡುಗರಿಗೆ ಮದುವೆ ಮಾಡುತ್ತಿರುವಾಗ, ವ್ಯವಸಾಯ ಮಾಡುವ ಹುಡುಗರು ಎತ್ತಿನ ನೊಗ ಬಿಚ್ಚಾಕಿ ಸಿಟಿ ಸೇರುತ್ತಿದ್ದಾರೆ.

ಕತ್ತಲಾದರೆ ಸಾಕು ಎಂತಹ ಕುಗ್ರಾಮದಲ್ಲೂ ಇರುವ ನಾಲ್ಕಾರು ಪುಟ್ಟ ಅಂಗಡಿಗಳು ಮಿನಿ ಬಾರ್‌ಗಳಾಗುತ್ತಾ ನಿತ್ಯ ನೂರಾರು ಡ್ರಿಂಕ್ಸ್ ಬಾಟಲ್ಗಳು ಖಾಲಿ ಆಗುತ್ತಿವೆ. ತಿಥಿ ಸಿನಿಮಾದಲ್ಲಿನ ಗಡ್ಡಪ್ಪನ ಪಾತ್ರ ಎಲ್ಲಾ ಊರಿನ ಮಾಮೂಲಿ ಕಥೆ-ವ್ಯಥೆಯಾಗುತ್ತಿದೆ. ರೈತರು ತಮ್ಮ ಮಕ್ಕಳಿಗೆ ಕಿವಿಮಾತು ಹೇಳುತ್ತಿದ್ದಾರೆ `ವ್ಯವಸಾಯ ಅಂದರೆ ಮನೆಮAದಿಯೆಲ್ಲಾ ಸಾಯ’ ಅನ್ನುವ ಪರಿಸ್ಥಿತಿ ಆಗಿದೆ ಕಣ್ರೋ `ನಾವು ವ್ಯವಸಾಯ ನಂಬಿ ಸತ್ತಿದ್ದೇ ಸಾಕು, ನೀವು ಎಲ್ಲಾದರೂ ಕೆಲಸ ಮಾಡ್ಕೊಂಡು ಸುಖವಾಗಿ ಇರಿ, ಇವತ್ತು ರೈತನಿಗಿಂತ ಕೂಲಿಯವನು ನೆಮ್ಮದಿಯಾಗದ್ದಾನೆ’ ಎಂದು ಹೇಳುವ ಮಾರ್ಮಿಕ ಮಾತು ನಿಜವೆನಿಸುತ್ತಿದೆ. ಹಿರಿಯರು ಮಾತನ್ನು ಗೌರವಿಸುವ ಮಕ್ಕಳು, ಊರಿನ ಹಬ್ಬಕ್ಕೆ ಎಲೆಕ್ಷನ್ಗೆ ಓಟು ಹಾಕಲು ಬರುವ ಸಿಟಿ ಸಿನೀಯರ್ ಹುಡುಗರ ಜೀನ್ಸ್ ಪ್ಯಾಂಟ್, ಟೀ ಸರ್ಟ್, ಸ್ಮಾರ್ಟ್ ಪೋನ್ ಆಕರ್ಷಣೆಯಲ್ಲಿ ಕಿರಿಯರು ಪ್ಯಾಕ್ಟರಿ ಹೋಟಲ್ ಗಾರ್ಮೆಟ್ಗಳಲ್ಲಿ ಕೆಲಸಕ್ಕೆ ಸೇರಿ ನಗರದ ನಿವಾಸಿಗಳಾಗುತ್ತಿದ್ದಾರೆ. ಮಹಿಳಾ ಸ್ವಸಹಾಯ ಸಂಘಗಳಿAದ, ಹೈನುಗಾರಿಕೆಯಲ್ಲಿ ಲೀಟರ್ ಹಾಲಿಗೆ ನಾಲ್ಕು ರೂಪಾಯಿ ಸರ್ಕಾರದ ಸಹಾಯಧನ ನೆಚ್ಚಿಕ್ಕೊಂಡು ಒಂದಷ್ಟು ಹಳ್ಳಿಗಳು ಉಸಿರಾಡುತ್ತಿರುವುದು, ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿರುವುದು. ಹತ್ತಾರು ಕಾನ್ವೆಂಟ್‌ನ ಬಸ್ಸುಗಳು ಹಳ್ಳಿಗಳಿಗೂ ಬರುತ್ತಿರುವುದರಿಂದ, ಸಿಟಿ ಕೇಬಲ್, ಸಾರಿಗೆ ಸಂಪರ್ಕಗಳು ಇರುವುದರಿಂದ ಒಂದಷ್ಟು ಸಂಸಾರ ಹಳ್ಳಿಯಲ್ಲಿ ಉಳಿಯಲು ಸಾಧ್ಯವಾಗಿದೆ. ಇದಲ್ಲದಿದ್ದರೆ ಮಹಾನಗರಗಳಾಗುತ್ತಿದ್ದವು.

ಹಳ್ಳಿಗಳಿಗೆ ಬೇಕಾಗಿರುವುದು ಬೆಂಬಲ ಬೆಲೆಯಲ್ಲ. ಸರ್ವ ಋತುವಿನಲ್ಲೂ ಬೆಲೆ ಕುಸಿಯದ ರೀತಿ ಕೃಷಿ ಮಾರುಕಟ್ಟೆ ವ್ಯವಸ್ಥೆ. ಹಸುವಿನ ಹಾಲು ಕರೆದ ಕೆಲವೇ ಗಂಟೆಗಳಲ್ಲಿಕ ಕೆಡುವಂತದ್ದನ್ನು, ಹತ್ತಾರು ಉಪ ಉತ್ಪನ್ನಗಳಾಗಿ ನೂರಾರು ದಿನಗಳು ನಂದಿನಿ ಹೆಸರಲ್ಲಿ ಬಳಸುವಂತಹ ಹೈನುಗಾರಿಕೆ ಕ್ರಾಂತಿಯಾಗಿರುವಾಗ, ಬೆಳದ ಪ್ರತಿ ಫಸಲಿಗೂ ನಂಬಿಕೆಯ ಬೆಲೆ ಸಿಗುವ ಕೃಷಿ ಮಾರುಕಟ್ಟೆ ನಿರ್ಮಾಣ ಆದರಷ್ಟೆ ಹಳ್ಳಿಗಳಲ್ಲಿ ಸಂಕ್ರಾAತಿ. ಸುಗ್ಗಿ ಹಬ್ಬಕ್ಕೆ ಕೈ ಜೋಡಿಸಲು ನಗರದಿಂದ “ಮರಳಿ ಮಣ್ಣಿಗೆ” ನಡೆಯಲ್ಲಿ ಹಳ್ಳಿಗಳು ಹಸಿರಾಗಿರುತ್ತವೆ. ಇಲ್ಲದಿದ್ದರೆ ವೃದ್ದಾಶ್ರಮದತ್ತ ಹಳ್ಳಿಗಳು ಸಾಗುತ್ತವೆ.

– ಭಾಸ್ಕರ್, ಕೊತ್ತತ್ತಿ, ಮಂಡ್ಯ.
ಶಿಕ್ಷಕರು ಹಾಗೂ ಹವ್ಯಾಸಿ ಬರಹಗಾರರು ಎಂ.ಎಸ್ಸಿ, ಎಂ.ಇಡಿ.
ಮೊ : 9901399310

January 18, 2020