ವಿಜ್ಞಾನ ಚಿತ್ರಗಳ ಚಿತ್ತಾರ

ನಮ್ಮ ಶಾಲೆ ಸರ್ಕಾರಿ ಪ್ರೌಢಶಾಲೆ ಮುತ್ತೇಗೆರೆ, ಮಂಡ್ಯ.

ಉತ್ತರವಲಯ, ಮಂಡ್ಯ (ಜಿ) ಇಲ್ಲಿ ೨೦೧೮ನೇ ವರ್ಷವನ್ನು ವಿನೂತನವಾಗಿ ವಿಶೇಷವಾಗಿ ವಿಜ್ಞಾನ ರಂಗೋಲಿ
ಸ್ಪರ್ಧಾ ಚಟುವಟಿಕೆಯ ಚಿತ್ತಾರದೊಂದಿಗೆ ಸ್ವಾಗತಿಸಲಾಯಿತು. ನೂರು ಬಣ್ಣಗಳ ಕನಸು ಹೊತ್ತ ಎಳೆಯ ಮನಸ್ಸುಗಳು ರಂಗು-ರಂಗಿನ ರಂಗವಲ್ಲಿಯ ನಡುವೆ ರಂಗೇರಿ ಸಂಭ್ರಮಿಸುತ್ತಿದ್ದವು. ಮಕ್ಕಳ ಹೊಸವರ್ಷವನ್ನು ಸಂಭ್ರಮಿಸಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನಿಸಿ, ವಿಜ್ಞಾನ ವಿಷಯದ ಬಹುತೇಕ ಎಲ್ಲಾ ಚಿತ್ರಗಳನ್ನು ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಿ ಅದನ್ನು ಅವರು ಹೊಸ ವರುಷದಂದು ಶಾಲಾ ಆವರಣದಲ್ಲಿ ಬಿಡಿಸಿ ಬಣ್ಣ ತುಂಬಿಸಲು ತಿಳಿಸಲಾಯಿತು. ಇದರಿಂದ ಪ್ರೇರಿತಗೊಂಡ ವಿದ್ಯಾರ್ಥಿಗಳು ತುಂಬು ಉತ್ಸಾಹದಿಂದ “ಮಣ್ಣ ಬಿಟ್ಟು ಮಡಕೆ ಇಲ್ಲ ; ನನ್ನ ಬಿಟ್ಟು ದೇವರಿಲ್ಲ” ಎಂಬ ನಾಣ್ನುಡಿಯಂತೆ ತಮ್ಮೊಳಗಿನ ಪ್ರತಿಭೆಯನ್ನು ಚಿತ್ರಗಳಿಗೆ ರಂಗು ತುಂಬುವ ಮೂಲಕ ಅನಾವರಣಗೊಳಿಸಿದರು.
ಸುಮಾರು ೩೦ ಚಿತ್ರಗಳಲ್ಲಿ ೩೦೦ ಬಣ್ಣಗಳ ಚೆಲ್ಲಾಟದ ಸೊಬಗು ಮನಸೂರೆಗೊಂಡಿತು. ಇಂತಹ ಆಕರ್ಷಕ
ವಿಜ್ಞಾನ ರಂಗವಲ್ಲಿ ಚಟುವಟಿಕೆ ಸೊಬಗನ್ನು ಕಣ್ಮನ ತುಂಬಿಕೊಳ್ಳಲು ನಮ್ಮ ನೆರೆಯ ಪ್ರಾಥಮಿಕ ಶಾಲೆಯ
ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸಾಕ್ಷಿಯಾದರು.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಮನೋರಂಜನೆಯ ಜೊತೆಗೆ ಕಲಿಕಾ ಪ್ರಕ್ರಿಯೆಯನ್ನುಂಟು ಮಾಡಲು “ಊರಿಗೆ ದಾರಿ ಯಾರು ತೋರಿದರೆನಂತೆ” ಎಂಬ ಮಾತಿನಂತೆ ನಲಿಯುತ್ತ ಕಲಿಯಲು ಈ ಬಗೆಯ ಚಟುವಟಿಕೆಗಳು
ಪೂರಕವಾಗುವ ಆ ನಿಟ್ಟಿನಲ್ಲಿ ಶಿಕ್ಷಕರ ಪ್ರಯತ್ನವೂ ಕೂಡ ಫಲಪ್ರದವಾಯಿತು.

January 20, 2020